ಈಸ್ಟ್ ಇಂಡಿಯ ಕಂಪನಿ ನಾಣ್ಯಗಳು

	ಕ್ರಿ.ಶ. ಸುಮಾರು 1600ರಿಂದ ಕಂಪನಿ ತನ್ನದೇ ಆದ ನಾಣ್ಯಗಳನ್ನು ಚಲಾವಣೆಗೆ ತಂದಿತು. ಅಲ್ಲಿಂದ ಮುಂದೆ ಅವು ವ್ಯಾಪಕವಾಗಿಯೂ ವೈವಿಧ್ಯಮಯವಾಗಿಯೂ ಬೆಳೆದುಬಂದವು. ಕೇವಲ ಕಂಪನಿಯ ವ್ಯಾಪಾರಕ್ಕಾಗಿ ಸ್ಪೇನ್ ನಾಣ್ಯಗಳ ಮಾದರಿಯಲ್ಲಿ ಪ್ರತ್ಯೇಕ ಬೆಳ್ಳಿ ನಾಣ್ಯಗಳನ್ನು ಮೊದಲು ಟಂಕಿಸಲಾಯಿತು. ಆದರೆ ಇದು ಭಾರತದಲ್ಲಿ ಹೆಚ್ಚು ಚಲಾವಣೆಗೆ ಬರಲಿಲ್ಲ. ಮುಂದೆ ಎರಡು ಶತಮಾನಗಳ ಕಾಲ ಕಂಪನಿಯ ಪ್ರಾಬಲ್ಯವಿದ್ದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಟಂಕಸಾಲೆಗಳಿದ್ದು ಅವುಗಳೆಲ್ಲ ಸ್ಥಳೀಯ ನಾಣ್ಯಗಳನ್ನನುಕರಿಸಿ ಬೇರೆ ಬೇರೆ ರೀತಿಯ ನಾಣ್ಯಗಳನ್ನು ಅಚ್ಚುಹಾಕಿದವು. ಹೀಗೆ ಕಲ್ಕತ್ತ, ಮಚಲೀಪಟ್ಟಣ ಮತ್ತು ಸೂರತ್‍ಗಳಲ್ಲಿ ಟಂಕಸಾಲೆಗಳೇರ್ಪಟ್ಟವು. ಕೆಲಕಾಲದ ಅನಂತರ ಮಚಲಿಪಟ್ಟಣ ಮತ್ತು ಸೂರತ್‍ಗಳ ಟಂಕಸಾಲೆಗಳು ಕ್ರಮವಾಗಿ ಮದ್ರಾಸು ಮತ್ತು ಬೊಂಬಾಯಿಗಳಿಗೆ ವರ್ಗಾವಣೆಯಾದವು. ಮುಂದೆ ವಾರಾಣಸಿಯಲ್ಲಿ ಒಂದು ಟಂಕಸಾಲೆ ಏರ್ಪಟ್ಟಿತು.

ಚಿನ್ನದ ಪಗೋಡ ಮತ್ತು ಬೆಳ್ಳಿಯ ಹಣ ಹದಿನೇಳನೆಯ ಶತಮಾನದ ಮಧ್ಯ ಭಾಗದಿಂದಲೇ ಮದ್ರಾಸಿನಿಂದ ಪ್ರಚುರವಾದಂತೆ ತಿಳಿದುಬರುತ್ತದೆ. ಮುಮ್ಮುಖದಲ್ಲಿ ದೇವರ ಒಂದು ಮೂರ್ತಿ ಅಥವಾ ಮೂರ್ತಿಗಳಿದ್ದು ಹಿಮ್ಮುಖದಲ್ಲಿ ಚುಕ್ಕೆಗಳ ಮಧ್ಯೆ ನಕ್ಷತ್ರಗಳಿರುವ ಚಿನ್ನದ ಪಗೋಡಗಳು ಹದಿನೆಂಟನೆಯ ಶತಮಾನದಲ್ಲೂ ಮುಂದುವರಿದಿವೆ. ಬೊಂಬಾಯಲ್ಲಿ ಸ್ವಲ್ಪ ತಡವಾಗಿ ಆರಂಭವಾದ ಈ ನಾಣ್ಯಗಳ ಹಿಂಭಾಗದಲ್ಲಿ ಐದು ಪಂಕ್ತಿಯ ಅಂಕನ (ಉಲ್ಲೇಖ)ವಿದೆ. ಅಲ್ಲದೆ ಇದೇ ರೀತಿಯ ತಾಮ್ರದ ನಾಣ್ಯಗಳೂ ಅಚ್ಚಾಗಿವೆ. ಕಿರೀಟ, ಅದರ ಮೇಲೆ ಜಿ.ಆರ್.ಎಂಬ ಅಕ್ಷರಗಳು ಮುಮ್ಮುಖದಲ್ಲೂ ಂusಠಿiಛಿio ಖegiseಣ Seಟಿಚಿಣus ಎಂಬ ಅಂಕನ ಹಿಮ್ಮುಖದಲ್ಲೂ ಇರುವ ಒರಟು ತಾಮ್ರದ ನಾಣ್ಯಗಳು ಮುಂದೆ ಚಲಾವಣೆಗೆ ಬಂದವು. ಇವುಗಳಲ್ಲಿ ಕಾಲವನ್ನು ಸೂಚಿಸಿರುವವು ಕೆಲವು. ಇಲ್ಲದವು ಕೆಲವು. ಹದಿನೆಂಟನೆಯ ಶತಮಾನದ ಕಡೆಯಲ್ಲಿ ಈ ನಾಣ್ಯಗಳ ಹಿಂಭಾಗದಲ್ಲಿ ಹೃದಯಾಕಾರವಿದ್ದು ಅದರ ಮೇಲೆ ಇ.ಜಿ.ಸಿ. ಎಂಬ ಕಂಪನಿಯ ಗುರುತು ಮತ್ತು ಮೇಲ್ಭಾಗದಲ್ಲಿ 4 ಎಂಬ ಚಿಹ್ನೆಯೂ ಕಾಣಿಸಿಕೊಂಡವು. ಅಲ್ಲಿಂದ ಮುಂದೆ ತಕಡಿಯ ಕಾಸು ಪ್ರಚಾರಕ್ಕೆ ಬಂತು.

ಈ ನಾಣ್ಯಗಳ ಜೊತೆಯಲ್ಲೇ ಮೊಗಲ್ ನಾಣ್ಯಗಳನ್ನನುಕರಿಸಿದ ಬೆಳ್ಳಿ ರೂಪಾಯಿಗಳು ಹೇರಳವಾಗಿ ಪ್ರಚುರವಾದವು. ಚನ್ನಪಟ್ಟಣದ (ಮದ್ರಾಸು) ಹೆಸರುಳ್ಳ ಔರಂಗಜೇಬನ ರೂಪಾಯಿಗಳ ಮತ್ತು ಪಗೋಡಗಳ ಮಾದರಿ ಮೊದಲು ಆರಂಭವಾಗಿ ಮುಂದೆ ಬಹದ್ದೂರ್ ಷಾಹನ ನಾಣ್ಯಗಳ ಅನುಕರಣೆಯಲ್ಲಿ ಹಿಮ್ಮುಖದಲ್ಲಿ ಚಿಕ್ಕ ನಕ್ಷತ್ರಾಕಾರವೂ ಸೇರಿಕೊಂಡಿರುತ್ತದೆ. ಎರಡನೆಯ ಆಲಂಗೀರನ ನಾಣ್ಯಗಳನ್ನನುಕರಿಸಿದ ಕೆಲವು ಬೆಳ್ಳಿ ರೂಪಾಯಿಗಳ ಹಿಂಭಾಗದಲ್ಲಿ ತ್ರಿಶೂಲದ ಚಿಹ್ನೆಯಿದ್ದು ಆರ್ಕಾಟನ ಹೆಸರನ್ನು ಹೊಂದಿದ್ದರೂ ಅವು ಮದ್ರಾಸಿನಲ್ಲೇ ಅಚ್ಚಾದವು. ಇವುಗಳಲ್ಲಿ ರಾಜನ ಆಳ್ವಿಕೆಯ ಬದಲಾಯಿಸಿದ ಹಿಜಿರ ಸಂವತ್ಸರವನ್ನು ಮಾತ್ರ ಬೇರೆ ಬೇರೆಯಾಗಿ ಕೊಟ್ಟಿದೆ. ಬೊಂಬಾಯಿಂದ ಅಚ್ಚಾದ ರೂಪಾಯಿಗಳಲ್ಲಿ ಫರೂಕ್ ಸಿಯಾರ್ ಮತ್ತು ಷಾ ಆಲಮನವರೆಗೆ ಇದ್ದ ಚರ್ಕವರ್ತಿಗಳ ನಾಣ್ಯಗಳ ಅನುಕರಣೆಯನ್ನೂ ಕಾಣಬಹುದು. ಕಲ್ಕತ್ತ ಟಂಕಸಾಲೆಯಲ್ಲಿ ಮೊಗಲಾಯರ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಅನುಕರಿಸಿ ಹದಿನೆಂಟನೆಯ ಶತಮಾನದ ಮಧ್ಯಭಾಗದಿಂದೀಚೆಗೆ ಅಚ್ಚು ಹಾಕಿಸಲಾಗಿದೆ. ಇವುಗಳಲ್ಲಿ ಷಾ ಆಲಮನ ನಾಣ್ಯಗಳ ಅನುಕರಣೆಯೇ ಹೆಚ್ಚು. ವಾರಾಣಸಿಯಿಂದ ಹೊರಟ ಇಂಥ ನಾಣ್ಯಗಳಲ್ಲಿ ಆರ್ಕಾಟ್ ನಾಣ್ಯಗಳಂತೆಯೇ ರಾಜನ ಆಳ್ವಿಕೆಯ ವರ್ಷದ ಬದಲಾವಣೆಯಿಲ್ಲ.

ಹತ್ತೊಂಬತ್ತನೆಯ ಶತಮಾನದಿಂದೀಚೆಗೆ ಮೊಗಲ್ ನಾಣ್ಯಗಳನ್ನೇ ಅನುಕರಿಸಿದ್ದರೂ ಹೆಚ್ಚು ನಾಣ್ಯಗಳು ಯಂತ್ರಮುದ್ರಿತವಾಗಿ ಯೂರೋಪಿನ ನಾಣ್ಯಗಳ ಮಾದರಿಯಲ್ಲಿ ಹೊರಬಂದವು. ಬೇರೆ ಬೇರೆ ಟಂಕಸಾಲೆಗಳಲ್ಲಿ ಒಂದೇ ರೀತಿಯ ನಾಣ್ಯಗಳು ಬರಲಾರಂಭಿಸಿದರೂ ಒಂದೊಂದು ಟಂಕಸಾಲೆಯ ಗುರುತೂ ಪ್ರತ್ಯೇಕವಾಗಿ ಉಳಿದಿದೆ. ಹೀಗೆ ಆರ್ಕಾಟ್ ನಾಣ್ಯಗಳ ಮೇಲೆ ತ್ರಿಶೂಲ, ಕಲ್ಕತ್ತ ನಾಣ್ಯಗಳ ಮೇಲೆ ಗುಲಾಬಿ, ಬೊಂಬಾಯಿ ನಾಣ್ಯಗಳ ಮೇಲೆ ಮೊದಲು ಕಿರೀಟ, ಅನಂತರ ನಾಲ್ಕು ಚುಕ್ಕೆಗಳನ್ನು ಕಾಣಬಹುದು.

ಈ ಕಾಲದಲ್ಲಿ ಮದ್ರಾಸಿನಿಂದ ಪಗೋಡಗಳು ಇನ್ನೂ ಅಚ್ಚಾಗುತ್ತಿದ್ದವು. ಇವುಗಳ ಮೇಲೆ ಮತ್ತು ಇವುಗಳ ಅಂಶಗಳಾದ ಬೆಳ್ಳಿ ನಾಣ್ಯಗಳ ಮೇಲೆ ಗೋಪುರಾಕೃತಿಗಳು ಕಾಣಿಸಿಕೊಂಡವು. ಇವುಗಳ ಬೆಲೆಯನ್ನು ಇಂಗ್ಲಿಷ್‍ನಲ್ಲಿ ಗೋಪುರದ ಕೆಳಗೂ ಹಿಮ್ಮುಖದಲ್ಲಿ ತೆಲುಗು ಅಥವಾ ತಮಿಳಿನಲ್ಲೂ ಅಂಕನಗಳಲ್ಲಿ ಹಾಕಿದ್ದಾರೆ. ಈ ಕಾಲದಲ್ಲಿ ಹಲವು ರೀತಿಯ ಬೆಳ್ಳಿಯ ಹಣಗಳೂ ತಾಮ್ರದ ಕಾಸುಗಳೂ ಚಲಾವಣೆಗೆ ಬಂದವು. 

 ಕ್ರಿ. ಶ. 1835ರಿಂದೀಚೆಗೆ ಇಡೀ ದೇಶಕ್ಕೆಲ್ಲ ಅನ್ವಯಿಸುವಂತೆ ಒಂದೇ ರೀತಿಯ ನಾಣ್ಯಗಳನ್ನು ಎಂದರೆ ರೂಪಾಯಿ ಮತ್ತು ಅದರ ಭಾಗಗಳನ್ನು ಈಸ್ಟ್ ಇಂಡಿಯ ಕಂಪನಿ ಜಾರಿಗೆ ತಂದಿತು. ಅವುಗಳ ಮೇಲೆ ಮೊದಲು ನಾಲ್ಕನೆಯ ವಿಲಿಯಂನ ಅನಂತರ ವಿಕ್ಟೋರಿಯ ರಾಣಿಯ ಮೂರ್ತಿಗಳು ಮುಮ್ಮುಖದಲ್ಲೂ ಬೆಲೆ ಮತ್ತು ಕಂಪನಿಯ ಹೆಸರುಗಳು ಹಿಮ್ಮುಖದಲ್ಲೂ ಇವೆ. 1857ರ ಕ್ರಾತಿಯ ಅನಂತರ ಕಂಪನಿಯ ಹೆಸರು ನಿಂತುಹೋಗಿ ಚರ್ಕವರ್ತಿಗಳ ಹೆಸರಿನಲ್ಲಿಯೇ ನಾಣ್ಯಗಳು ಚಲಾವಣೆಗೆ ಬಂದವು.
 		 (ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ